ಪಂಚಾಕ್ಷರಿ -
ನಮಃ ಶಿವಾಯ ಎಂಬ ಮಂತ್ರ. ಇವನ್ನು ಶೈವರೂ ವೀರ ಶೈವರೂ ಬಹಳ ಪವಿತ್ರವೆಂದು ಭಾವಿಸಿದ್ದಾರೆ. ಇದಕ್ಕೆ ಓಂಕಾರ ಸೇರಿಸಿದರೆ ಷಡಕ್ಷರಿ ಮಂತ್ರ ಅಥವಾ ಪ್ರಣವ ಪಂಚಾಕ್ಷರಿಯಾಗುತ್ತದೆ. ಅಷ್ಟಾವರಣದಲ್ಲಿ ಈ ಮಂತ್ರ ಒಂದು ಸ್ಥಲವನ್ನು ಆಕ್ರಮಿಸಿದೆ. ಕೊಂಡಗುಳಿ ಕೇಶಿರಾಜ (1160) ಈ ಮಂತ್ರದ ಮಹಿಮೆಯನ್ನು ತಿಳಿಸುವುದಕ್ಕಾಗಿಯೇ ಷಡಕ್ಷರಿ ಮಂತ್ರದ ಮಹಿಮೆ ಎಂಬ ಗ್ರಂಥವನ್ನು ಬರೆದಿದ್ದಾನೆ. ವೇದದ ಶ್ರೀರುದ್ರ ಮಂತ್ರದಲ್ಲಿ ನಮಃ ಶಿವಾಹಚ, ಶಿವತರಾಯಚ ಎಂಬ ಪಂಕ್ತಿಯಿದೆ. ಬಸವಣ್ಣ ತನ್ನ ವಚನದಲ್ಲಿ ಭವಬಂಧನ ದುರಿತಂಗಳ ಗೆಲ್ವೊಡೆ ಓನಮಶ್ಶಿವಾಯ ಶರಣೆಂದೆಡೆ ಸಾಲದೆ ಎಂದು ಹೇಳಿದ್ದಾನೆ. ದಿನ ಪ್ರತಿ ಬೆಳಗು ಸಂಜೆ ಸ್ನಾನ ಮಡಿಯಿಂದ ಪರಿಶುದ್ಧರಾಗಿ 108 ಕ್ಕೆ ಕಡಿಮೆಯಿಲ್ಲದೆ ಈ ಮಂತ್ರವನ್ನು ಜಪಿಸಿದರೆ ಅಥವಾ ಲಿಖಿಸಿದರೆ ಮುಕ್ತಿ ಸುಲಭವಾಗಿ ದೊರಕುತ್ತದೆ ಎಂಬ ನಂಬಿಕೆ ವೀರಶೈವರಲ್ಲಿದೆ. ಸೂಕ್ಷ್ಮಾಗಮದಲ್ಲಿ ಓಂಕಾರ ಯುಕ್ತವಾದ ಪಂಚಾಕ್ಷರಿಯನ್ನು ಮಂತ್ರರಾಜ ಎಂದು ಕರೆಯಲಾಗಿದೆ. ಶಿವಗೀತೆಯಲ್ಲಿ ಪಂಚಾಕ್ಷರೀ ಜಪಪದಃ ಸಮಭಕ್ತಃ ಸಮೇಪ್ರಿಯಃ ಎಂದು ಹೇಳಿದೆ. ಸಿದ್ಧಾಂತ ಶಿಖಾಮಣಿಯಲ್ಲಿ ಪಂಚಾಕ್ಷರೀರ್ವದ್ವಿಮಾಮ್ ವಿದ್ಯಾಮ್ ಪ್ರಣವೇನ ಷಡಕ್ಷರೀಮ್ ಜಪೇ ಸಮಾಹಿತ್ಪೋ ಭೂತ್ವ ಶಿವಪೂಜಾ ಪರಾಯಣಃ ಎಂಬ ಮಾತಿಗೆ ಪಂಚಾಕ್ಷರಿ ಮಂತ್ರದ ಮಹಿಮೆಯನ್ನು ತಿಳಿದರೆ ಸಾಕು ಉಳಿದ ಮಂತ್ರಗಳಿಂದ ಏನು ಪ್ರಯೋಜನ ಎಂದು ಅರ್ಥ.											(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ